Friday, June 9, 2017

ನಮ್ಮ ಸಂಗೀತ.. ..

ನಮ್ಮ ಸಂಗೀತ ಎಲ್ಲರನ್ನೂ ಸ್ವಾಗತಿಸುತ್ತದೆ; ಯಾರನ್ನೂ ಹೊರಗಿಡುವುದಿಲ್ಲ
-------------------------------------------
ಭಾರತೀಯ ಸಂಗೀತವೆನ್ನುವುದು ನಮಗೆ ದೇಶದ ಭಾವೈಕ್ಯವನ್ನು ತೋರಿಸಿಕೊಡುವ ಒಂದು ಅಪ್ರತಿಮ ಕಲಾ ಮಾಧ್ಯಮ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ನಮ್ಮೆಲ್ಲರನ್ನೂ ಒಟ್ಟುಕೂಡಿಸುವ ಸಾಮಥ್ರ್ಯ ಅದಕ್ಕಿದೆ. ಸಂಗೀತದೊಂದಿಗೆ ಬೆಸೆದುಕೊಂಡವರೆಲ್ಲ ಕುಟುಂಬದ ಸದಸ್ಯರಂತಾಗಿಬಿಡುತ್ತಾರೆ. ಅದು ಯಾರನ್ನೂ ಹೊರಗಿರಿಸಿಲ್ಲ. ನಮ್ಮ ಸಂಗೀತದ ಮುಖ್ಯ ಧ್ಯೇಯ ವಾಕ್ಯವೇ ಔದಾರ್ಯ, ಹೊಂದಾಣಿಕೆ ಮತ್ತು ಗೌರವಿಸುವುದು. ಇದು ಇಂಥವರಿಂದ ಇಂಥವರಿಗಾಗಿ ಎನ್ನುವ ನಿರ್ಬಂಧವನ್ನು ಯಾರೂ ಸಂಗೀತದ ಮೇಲೆ ವಿಧಿಸಿಲ್ಲ. ಒಂದೇ ಒಂದು ನಿಯಮವೆಂದರೆ ಆತನಿಗೆ ಸಂಗೀತದ ಮೇಲೆ ಪ್ರೀತಿ, ಶ್ರದ್ಧೆ, ಭಕ್ತಿ ಇರಬೇಕು ಅಷ್ಟೆ. ಸಂಗೀತವನ್ನು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಸಾಮರ್ಥ್ಯ ಇರಬೇಕು. ಜಾತಿ ಪಂಥ ಪಕ್ಷ ಗಮನಿಸದೆ ಎಲ್ಲ ಸಂಗೀತಗಾರರನ್ನು ನಾವು ಆದರಿಸಿದ್ದೇವೆ, ಗೌರವಿಸಿದ್ದೇವೆ. ಎಲ್ಲರ ಸಂಗೀತವನ್ನೂ ಮುಕ್ತವಾಗಿ ಕೇಳಿ ಆನಂದಿಸಿದ್ದೇವೆ.

ಹಿಂದುಸ್ಥಾನಿ ಸಂಗೀತದಲ್ಲಿ ಸುಮಾರು 75% ಕಲಾವಿದರು ಮುಸ್ಲಿಮರಾಗಿದ್ದಾರೆ. ಭೀಮಸೇನ್ ಜೋಶಿಯವರಾಗಲಿ ಅಮೀರ್ ಖಾನ್ ಇರಲಿ ಸಮಾನ ಗೌರವ, ಆದರವನ್ನು ನಮ್ಮಿಂದ ಅವರು ಪಡೆದುಕೊಂಡಿದ್ದಾರೆ. ಕಿಶೋರಿ ಅಮೋನ್ಕರ್ ಅವರಿಗೆ ರಸಿಕರಿಂದ ದೊರೆತ ಮೆಚ್ಚುಗೆಯೇ ಬೇಗಂ ಪರ್ವೀನ್ ಸುಲ್ತಾನ ಅವರಿಗೂ ಲಭ್ಯವಾಗಿದೆ. ಭಾರತದ ಅತ್ಯುನ್ನತ ಗೌರವ 'ಭಾರತರತ್ನ' ಪ್ರಶಸ್ತಿ ಪಡೆದವರಲ್ಲಿ ಬಿಸ್ಮಿಲ್ಲಾ ಖಾನ್ ಕೂಡ ಒಬ್ಬರು. ಸಿನಿಮಾ ಕ್ಷೇತ್ರಕ್ಕೆ ಬರೋಣ. ನೌಷಾದ್ ರಿಂದ ಹಿಡಿದು ತಲತ್ ಮಹಮ್ಮದ್, ಮಹಮ್ಮದ್ ರಫಿ, ನೂರ್ಜೆಹಾನ್ ಸುರಯ್ಯ, ಶಂಶಾದ್ ಬೇಗಂ ವರೆಗೆ ಅದೆಷ್ಟು ಮಂದಿಯ ಸಂಗೀತವನ್ನು ನಾವು ಕೇಳಿ ಸಂತೋಷ ಪಟ್ಟಿಲ್ಲ! ನೌಷಾದ್, ಸಿ.ರಾಮಚಂದ್ರ, ಶಂಕರ್-ಜೈಕಿಶನ್ ಮೊದಲಾದವರ ಸಂಗೀತವನ್ನು ತಮ್ಮ ಅದ್ಬುತ ಕೊಡುಗೆಯಿಂದ ಸೂಪರ್ ಹಿಟ್ ಮಾಡಿದ ಸೆಬೇಸ್ಟಿಯನ್, ಚಿಕ್ ಚಾಕೊಲೇಟ್ ಮೊದಲಾದ ಗೋವಾದ ಕ್ರಿಶ್ಚಿಯನ್ ಅರೇಂಜರ್ಸ್ ನ್ನ ಮರೆಯಲು ಸಾಧ್ಯವೇ? ಬರ್ಸಾತ್ ಮೆ, ಅವಾರಾಹೂಂ, ರಾಮಯ್ಯ ವಸ್ತಾವಯ್ಯ ಮೇರ ಜೂತಹೆ ಜಪಾನಿ, ಗೋರೆ ಗೋರೆ ಓ ಬಾಂಕೆ ಚೋರೆ ಮೊದಲಾದ ಹಾಡುಗಳ ಇಂಟ್ರೋ ಮತ್ತು ಬಿಜಿಎಂ ಗಳನ್ನು ಜ್ಞಾಪಿಸಿಕೊಳ್ಳಿ. ಇವೆಲ್ಲ ಅವರ ಕೊಡುಗೆಗಳು.
 
ಆಂದ್ರದ ನಾಗಸ್ವರ ವಾದಕರಾದ ಶೇಕ್ ಚಿನ್ನಾಮೌಲಾನ ಸಾಹೇಬರಿಂದ ಹಿಡಿದು ಇಂದಿನ ಪ್ರಸಿದ್ಧ ನಾಗಸ್ವರ ವಾದಕರಾದ ಮೆಹಬೂಬ್ ದಂಪತಿಯವರೆಗೆ ಎಲ್ಲರೂ ಸಂಗೀತ ಕ್ಷೇತ್ರದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ, ಇತ್ತೀಚೆಗೆ ತಾನೇ ಈ ದಂಪತಿಯ ವಾದನ ತಿರುಪತಿಯ ವೆಂಕಟೇಶ್ವರ ಭಕ್ತಿ ಚ್ಯಾನಲ್ನಲ್ಲಿ ಪ್ರಸಾರವಾಯಿತು. ಹಾಗೇನೇ ತಿರುವಯ್ಯರಿನ ತ್ಯಾಗರಾಜೋತ್ಸವದಲ್ಲಿ
 ಈ ದಂಪತಿ ಹಿಂದೂಗಳ ಪವಿತ್ರ ಪೋಷಾಕನ್ನು ಧರಿಸಿ ಕಾರ್ಯಕ್ರಮ ನೀಡಿದ್ದಾರೆ. ಈ ಚಿತ್ರವನ್ನು ಉಸ್ತಾದ ಜಕೀರ್ ಹುಸೇನ್ ಮತ್ತ ವಿದುಷಿ ಶುಭಾ ಮುದ್ಗಲ್ ಅಂತರ್ಜಾಲದಲ್ಲಿ  'ಭಾರತೀಯ ಸಂಗೀತ ಜಾತಿ ಮತ ಪಂಥಗಳ ಗೋಡೆಯನ್ನು ದಾಟಿ ವಿಶ್ವನಾದವಾಗಿ ಮೆರೆಯುವ ಕಲೆಯಾಗಿದೆ' ಎನ್ನುವ ಶೀರ್ಷೀಕೆಯೊಂದಿಗೆ ಪ್ರಕಟಿಸಿದ್ದಾರೆ.

ಕೇರಳದ ಕಡೆಗೆ ಒಂದಷ್ಟು ದೃಷ್ಟಿ ಹಾಯಿಸೋಣ. ಪ್ರಸಿದ್ದ ಗಾಯಕ ನೆಯ್ಯಾಟಿಂಕರ ವಾಸುದೇವನ್ ದಲಿತ ವರ್ಗಕ್ಕೆ ಸೇರಿದವರು. ಇವರಿಗೆ ಸಂಗೀತ ಪಾಠ ಮಾಡಿದವರು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು. ವಾಸುದೇವನ್ ನಾಲ್ಕು ಬಾರಿ ಮದರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ 'ಬೆಸ್ಟ್ ವೋಕಲಿಸ್ಟ್' ಪ್ರಶಸ್ತಿ ಗಳಿಸಿದ್ದಾರೆ. ತಿರುವಾಂಕೂರಿನ ಮಹಾರಾಣಿ ಸಂಪ್ರದಾಯವನ್ನು ಬದಿಗೊತ್ತಿ ವಾಸುದೇವನ್ ಅವರನ್ನು ನವರಾತ್ರಿ ಮಂಟಪದಲ್ಲಿ ಹಾಡುವಂತೆ ಆಹ್ವಾನಿಸಿದ್ದಾರೆ. ಕೇರಳದ ಪರಂಪರಾಗತ ಕಲೆ ಕಥಕಳಿಯ ಪ್ರಸಿದ್ಧ ಭಾಗವತರಲ್ಲಿ ಒಬ್ಬರು ಹೈದರಾಲಿ. ಎಲ್ಲಿದೆ ಭೇದ ಭಾವ? ಕೇರಳದ ಸಿನಿಮಾರಂಗ ಕೌತುಕ ಹುಟ್ಟಿಸುಂಥ ಪ್ರತಿಭೆಗಳ ಸೌಹಾರ್ದ ಸಂಗಮಕ್ಕೆ ಉದಾಹರಣೆಯಾಗಿದೆ. 'ಎಂದೇ ಕಣ್ಣನು ಕರುಪ್ಪು ನಿರಂ' ನಂತಹ ಹತ್ತಾರು ಮಧುರ ಹಾಡುಗಳನ್ನು ಸಂಯೋಜಿಸಿದ ಜಾನ್ಸನ್ ಮಾಸ್ಟರನ್ನು ರಸಿಕರು ಹಾಡಿ ಹರಸಲಿಲ್ಲವೇ? ಯೇಸುದಾಸರಿಗೆ- ಮಲಯಾಳಿಗಳಿಗೆ ದಾಸೇಟನ್- 'ಗಾನ ಗಂಧರ್ವ' ಪ್ರಶಸ್ತಿಯನ್ನು ರಸಿಕರು ತಾವೇ ನೀಡಿದ್ದಲ್ಲವೇ? ಪಿ.ಭಾಸ್ಕರನ್ ಅವರ ಹಾಡುಗಳಿಗೆ ಸಂಗೀತ ನೀಡಿದವರು ಪ್ರತಿಭಾವಂತ ಸಂಗೀತ ನಿರ್ದೇಶಕ ಮೊಹಮ್ಮದ್ ಶಬೀರ್ ಬಾಬುರಾಜ್, ಹಾಡಿದವರು ಯೇಸುದಾಸ್ ಅಭಿನಯಿಸಿದವರು ಪ್ರೇಮ್ ನಜೀರ್.(ಉದಾ: ಚಿತ್ರ ಭಾರ್ಗವಿ ನಿಲಯಂ) ಭಾವೈಕ್ಯಕ್ಕೆ ಇದಕ್ಕಿಂತ ಮಿಗಿಲಾದ ನಿದರ್ಶನ ಇನ್ನೇನು ಬೇಕು?

ತಮಿಳು ಚಿತ್ರರಂಗದ ಪ್ರಯೋಗಾತ್ಮಕ ಸಂಗೀತ ನಿರ್ದೇಶಕರೆಂದು ಹೆಸರು ಮಾಡಿದವರಲ್ಲಿ ಒಬ್ಬರು ಕೆ.ಆರ್.ರೆಹಮಾನ್ ಇನ್ನೊಬ್ಬರು ಡಿ.ಇಮ್ಮನ್(ಇಮ್ಮಾನ್ಯುವೆಲ್).

ಹೊರಗಿನವರನ್ನು ಕರೆದು ನಮ್ಮವರೇ ಎನ್ನುವಷ್ಟರ ಮಟ್ಟಿಗೆ ಅವರನ್ನು ಅದರಿಸಿ ಗೌರವಿಸವುದರಲ್ಲೂ ನಾವು ಹಿಂದೆ ಬಿದ್ದಿಲ್ಲ. ಪಾಕಿಸ್ಥಾನದ ನಜಾಕತ್ ಆಲಿಖಾನ್, ಸಲಾಮತ್ ಆಲಿಖಾನ್, ಮೆಹಂದಿ ಹಸನ್, ಗುಲಾಂ ಆಲಿ, ಹಬೀಬ್ ವಾಲಿ(ಅವರ 'ಲಗತಾ ನಹೀಂ ಹೆ ದಿಲ್ ಮೆರಾ' ಗಜಲನ್ನು ಹೇಗೆ ತಾನೇ ಮರೆಯಲು ಸಾಧ್ಯ?) ಮೊದಲಾದ ಕಲಾವಿದರ ಸಂಗೀತವನ್ನು ನಾವು ಮನಸಾರೆ ಮೆಚ್ಚಿ ಕೊಂಡಾಡಿದ್ದೇವೆ. ಅಮೇರಿಕದ ಜಾನ್ ಬಿ ಹಿಗ್ಗಿನ್ಸ್ ಅವರಿಗೆ ಕಚ್ಚೆ ಪಂಚೆ ಉಡಿಸಿ, ತಿಲಕ ಹಚ್ಚಿ, 'ಭಾಗತರ್' ಪಟ್ಟಕಟ್ಟಿ ಸಂತಸ ಪಟ್ಟಿದ್ದೇವೆ. ಹಿಂದುಸ್ಥಾನಿ ಗಾಯಕ ಬಡೇಗುಲಾಂ ಆಲಿ(ಮೂಲ ಪಾಕಿಸ್ಥಾನದ ಲಾಹೋರ್) ಅವರಿಗೆ ಭಾರತದ ನಾಗರಿಕತೆ ಒದಗಿಸಿ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸುವಷ್ಟು ಹೃದಯ ವೈಶಾಲ್ಯವನ್ನು ಸಂಗೀತ ನಮಗೆ ಕರುಣಿಸಿದೆ. ಜಿ ಎನ್ ಬಿ ಕಾರ್ಯಕ್ರಮವೊಂದರಲ್ಲಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. ಕಲಾವಿದರು ಯಾರೇ ಇರಲಿ ಅವರ ಸಂಗೀತ ಚೆನ್ನಾಗಿದ್ದರೆ ಕೇಳಿ ಸಂತೋಷ ಪಡುವುದು, ಆಸಕ್ತಿ ತೋರಿದರೆ ಕಲಿಸುವುದು ನಮ್ಮ ಸಹಜ ಗುಣ.

ಸಂಗೀತದಲ್ಲಿ ಇಂಥ ಮುಕ್ತ ಮನಸ್ಸಿಗೆ, ಹೊಂದಾಣಿಕೆಯ ಗುಣಕ್ಕೆ ನಮಗೆ ತ್ರಿಮೂರ್ತಿಗಳೇ  ಮಾದರಿಯಾಗಿ ಸಿಗುತ್ತಾರೆ. ದೀಕ್ಷಿತರು ಕಾಶಿಯಿಂದ ಬರುವಾಗ ಹಲವಾರು ಹಿಂದುಸ್ಥಾನಿ ರಾಗಗಳನ್ನು ಕಲಿತು ಅದನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿಕೊಂಡರು. ಪಾಶ್ಚಾತ್ಯ ಸಂಗೀತದ ಶೈಲಿಯಲ್ಲಿ ಅನೇಕ ಇಂಗ್ಲಿಷ್ ನೋಟ್ ಗಳನ್ನು ರಚಿಸಿದರು, ತ್ಯಾಗರಾಜರು ಕುಂತಲವರಾಳಿ, ಸುಪೋಷಿಣಿಯಂಥ ರಾಗಗಳಲ್ಲಿ ಪಾಶ್ಚಾತ್ಯ ಶೈಲಿಯ ಕೃತಿಗಳನ್ನು(ಶರಸಮರೈ, ರಮಿಂಚುವಾರೆವರುರಾ) ರಚಿಸಿದ್ದಾರೆ. ಯೂರೋಪಿನಿಂದ  ಪಿಟೀಲನ್ನೂ, ಜಿಪ್ಸಿಗಳಿಂದ ಮ್ಯಾಂಡೊಲಿನನ್ನೂ, ಜಾಸ್ ಸಂಗೀತದಿಂದ ಸ್ಯಾಕ್ಸನ್ನೂ, ಜನಪದದಿಂದ ಮಡಿಕೆಯನ್ನೂ ಶಾಸ್ತ್ರೀಯ ಸಂಗೀತಕ್ಕೆ ಹೊಂದಿಸಿಕಂಡ ನಮ್ಯತೆ ನಮ್ಮದು. Any experiment, adaptation is acceptable so long as it is compatible with the ethos of our music and does not mangle the aesthetic of it  . ಕವಿ ಕಯ್ಯಾರರು ಘೋಷಿಸಿದಂತೆ ಆರ್ಯರೋ ಮೊಗಲರೋ ಕ್ರೈಸ್ತರೋ ತಡೆಯೇನು ಎಲ್ಲರೂ ಬನ್ನಿ, ನಮ್ಮವರೇ ಆಗಿ ಎಂದು ಸ್ವಾಗತಿಸುತ್ತಿದೆ ನಮ್ಮ ಸಂಗೀತ.
- ಈಶ್ವರಯ್ಯ  
                              (ಸಂಗೀತ ಕಾರ್ಯಾಗಾರದಲ್ಲಿ ನೀಡಿದ ಉಪನ್ಯಾಸದಿಂದ ಆಯ್ದ ಭಾಗಗಳು)

No comments:

Post a Comment